ಕನಸು ಮತ್ತು ಹಗಲುಗನಸು : ನಿದ್ರೆಯ ಸಮಯದಲ್ಲಿ ಉದ್ಭವಿಸುವ ಭಾವರೂಪ ರಾಗಸರಣಿಯೇ, ನಿದ್ರಿಸುವ ವ್ಯಕ್ತಿಗೆ ನಿಜವೆಂಬಂತೆ ಭಾಸವಾಗುವ ಮಾನಸಿಕ ಪ್ರಕ್ರಿಯೆಯೇ ಕನಸು; ಸ್ವಪ್ನ (ಡ್ರೀಂ). ಎಚ್ಛರವಾಗಿರುವಾಗಲೇ ಹಲವರು ಕಟ್ಟಿಕೊಳ್ಳುವ ಆಪ್ಯಾಯಕರವೂ ಹಲವೊಮ್ಮೆ ಭ್ರಾಂತಿಮಯವೂ ಆದ ಕಲ್ಪನಾವಿಲಾಸವೇ ಹಗಲುಗನಸು (ಡೇ ಡ್ರೀಂ). ಕನಸು ಕಾಣುವುದು ಮನಸ್ಸಿನ ಮುಖ್ಯ ಲಕ್ಷಣಗಳಲ್ಲೊಂದು. ಇದರ ಇತಿಹಾಸ ಮಾನವನ ಅವತರಣಿಕೆಯಷ್ಟೇ ಪ್ರಾಚೀನವಾದದ್ದು. ಜಾಗೃತ, ಸ್ವಪ್ನ ಮತ್ತು ಸುಷುಪ್ತ ಎಂಬುದಾಗಿ ಮನಸ್ಸಿಗೆ ಮೂರು ಅವಸ್ಥಾವಿಶೇಷಗಳಿವೆ. ಸ್ವಪ್ನಾವಸ್ಥೆಯಲ್ಲಿನ ಮಾನಸಿಕ ಕ್ರಿಯೆಯೇ ಕನಸು. ಬಹಳ ಹಿಂದೆಯೇ ಭಾರತೀಯ ದಾರ್ಶನಿಕರೂ ಋಷಿಗಳೂ ಕನಸಿನ ರಚನೆಯನ್ನು, ಅರ್ಥವನ್ನು ಉದ್ದೇಶವನ್ನು ಹಾಗೂ ಮನುಷ್ಯನ ಜೀವನದಲ್ಲಿ ಅದಕ್ಕಿರುವ ಪ್ರಾಮುಖ್ಯವನ್ನು ಕೂಲಂಕಷವಾಗಿ ಚರ್ಚಿಸಿದ್ದಾರೆ. ಹಿಂದೂ, ಜೈನ ಮತ್ತು ಬೌದ್ಧ ದಾರ್ಶನಿಕರೂ ತಮ್ಮ ವಿಶೇಷ ಜ್ಞಾನದ ಸಹಾಯದಿಂದ ಹಾಗೂ ನಿಷ್ಠೆಯಿಂದ ಕೂಡಿದ ಅವಿರತ ಪರಿಶ್ರಮದಿಂದ ಮನಸ್ಸಿನ ರಚನೆಯನ್ನು ವಿವರಿಸುವುದಕ್ಕೂ ಇದರ ಅಧಾರದ ಮೇಲೆ ಕನಸನ್ನು ಸಮರ್ಪಕವಾಗಿ ವಿಶ್ಲೇಷಿಸುವುದಕ್ಕೂ ಶಕ್ತರಾಗಿದ್ದರು. ಆದರೆ ಇಂದು ಯಾವುದೂ ಮನೋವಿಜ್ಞಾನವೆನಿಸಿಕೊಂಡಿದೆಯೋ ಅದು ಪುರ್ಣವಾಗಿ ಪಾಶ್ಚಾತ್ಯರದಾಗಿದ್ದು ಕೇವಲ ಒಂದು ಶತಮಾನದ ಕಿರಿಯ ವಿಜ್ಞಾನವಾಗಿದೆ. ಕನಸಿನ ಬಗ್ಗೆ ಬಹಳ ಹಿಂದೆಯೇ ಮೂಡಿದ್ದ ಅಭಿಪ್ರಾಯಗಳನ್ನು ಆಧುನಿಕ ವಿಜ್ಞಾನದ ವಿಚಾರಧಾರೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಅತಿಶಯವಾದ ಉಪಯುಕ್ತತೆಯಿಂದ ಕೂಡಿದೆ.

ಕನಸು ಕಾಣುವುದೂ ನಿದ್ರೆ ಎಚ್ಚರಗಳಷ್ಟೇ ಸ್ವಾಭಾವಿಕವಾದ ಮಾನಸಿಕ ಕ್ರಿಯೆ. ಆದರೆ, ಮಾನವ ಇನ್ನೂ ಅನಾಗರಿಕ ದೆಸೆಯಲ್ಲಿದ್ದಾಗ, ಅವನಲ್ಲಿನ್ನೂ ಯೋಚನಾಶಕ್ತಿ ಬೆಳೆದಿರಲಿಲ್ಲವಾಗಿ ಕನಸಿನಲ್ಲಿ ನಡೆದ ಅನುಭವಗಳನ್ನು ನಿಜವೆಂದೇ ಆತ ಭ್ರಮಿಸುತ್ತಿದ್ದನಲ್ಲದೆ, ಕನಸಿಗೂ ನೈಜತೆಗೂ ನಡುವಣ ವ್ಯತ್ಯಾಸವನ್ನು ಅರಿತುಕೊಳ್ಳಲು ಅಸಮರ್ಥನಾಗಿದ್ದ. ತನ್ನ ಆದಿವಾಸಿ ಸಹಚರನೊಬ್ಬ ವಿಲಕ್ಷಣವಾಗಿ ನಡೆದುಕೊಂಡಿದ್ದನ್ನು ಹ್ಯಾಟ್ಕ್ಲಿಫ್ ಎಂಬ ಮನೋವಿಜ್ಞಾನಿ ವಿವರಿಸಿದ್ದಾನೆ. ಆ ಆದಿವಾಸಿ ಹಿಂದಿನ ರಾತ್ರಿ ಕಂಡಿದ್ದ ಕನಸೇ ಆತನ ವಿಲಕ್ಷಣ ನಡತೆಗೆ ಕಾರಣವಾಗಿತ್ತು. ಅದೊಂದು ಕನಸು ಎಂಬ ಭಾವನೆಯೇ ಅವನಲ್ಲಿ ಮೂಡಿರಲಿಲ್ಲ. ಆದರೆ ಕಾಲ ಕ್ರಮದಲ್ಲಿ ಕನಸೇ ಬೇರೆ, ನಮ್ಮ ನಿಜಜೀವನದಲ್ಲಿನ ಅನುಭವಗಳೇ ಬೇರೆ ಎಂಬ ಸತ್ಯ ಮಾನವನಿಗೆ ಗೋಚರವಾಯಿತು. ಕನಸು ಒಂದು ರೀತಿಯ, ಪರಲೋಕದಿಂದ ಬರುವ, 
ಅಮಾನುಷ ಸಂದೇಶವೆಂದೇ ಆಗಿನವರ ಭಾವನೆಯಾಗಿತ್ತು. ಅವರ ಅಭಿಪ್ರಾಯದಲ್ಲಿ ಭಯಾನಕ ಸ್ವಪ್ನಗಳು ಭೂತಪ್ರೇರಿತವೂ ಸುಖಸ್ವಪ್ನಗಳು ದೈವಪ್ರೇರಿತವೂ ಆಗಿದ್ದವು. ಅಂದಿನ ಮಾನವ ತನ್ನ ಕನಸುಗಳನ್ನು ಬಹಳ ಗಂಭಿರವಾಗಿ ತೆಗೆದುಕೊಳ್ಳುತ್ತಿದ್ದನಲ್ಲದೆ ಅದರ ಮೂಲಕ ಬರುವ ಸಂದೇಶಗಳನ್ನು ಎಳ್ಳಷ್ಟೂ ತಪ್ಪದೆ ಪಾಲಿಸಬೇಕೆಂದು ತಿಳಿದಿದ್ದ. ಇಂದಿಗೂ ಅನೇಕ ಹಳ್ಳಿಗಾಡು ಜನರಲ್ಲಿ ಇಂಥ ಮೂಢನಂಬಿಕೆಗಳು ಪ್ರಬಲವಾಗಿ ಮನೆಮಾಡಿರುವುದನ್ನು ಕಾಣಬಹುದು.

ಮನುಷ್ಯನಲ್ಲಿ ಆಲೋಚನಾಶಕ್ತಿ ಕುದುರಿದಂತೆ ಹಾಗೂ ನಾಗರಿಕತೆ ಬೆಳೆದಂತೆ, ಆತ ಕನಸಿನ ಮೂಲದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ. ಅನೇಕ ಪಾಶ್ಚಾತ್ಯ ದಾರ್ಶನಿಕರು ಮನಸ್ಸಿನ ಅಗಾಧ ಆಳವನ್ನು ಹೊಕ್ಕು ಮನಸ್ಸಿನ ವಿಶೇಷ ಕ್ರಿಯೆಯಾದ ಕನಸಿನ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಇವು ಯಾವುವೂ ಪ್ರಯೋಗಗಳ ಮೇಲೆ ನಿರ್ಧರಿಸಿದವಲ್ಲ.

ಕನಸಿನ ಕ್ರಮಬದ್ಧ ಹಾಗೂ ವೈಜ್ಞಾನಿಕ ಪರಿಶೀಲನ ಸಿಗ್ಮಂಡ್ ಫ್ರಾಯ್ಡನ ನೇತೃತ್ವದಲ್ಲಿ ಮನೋವಿಶ್ಲೇಷಣ ಸಿದ್ಧಾಂತದ ಒಂದು ಭಾಗವಾಗಿ ಆರಂಭವಾಯಿತು. ಫ್ರಾಯ್ಡ್‌ ತನ್ನ ದಿಗ್ಭ್ರಮೆಗೊಳಿಸುವಂಥ ಸಂಶೋಧನೆಗಳಿಂದ ವಿಜ್ಞಾನ ಕ್ಷೇತ್ರದಲ್ಲೇ ದೊಡ್ಡ ವಿಚಾರಕ್ರಾಂತಿ ಯೊಂದನ್ನು ಎಬ್ಬಿಸಿದ. ಇದು ಡಾರ್ವಿನ್ನ ವಿಕಾಸವಾದಕ್ಕೆ ಸರಿದೊರೆಯಾಗಿತ್ತು. ಫ್ರಾಯ್ಡನ ಮನೋವಿಶ್ಲೇಷಣ ಸಿದ್ಧಾಂತದಿಂದ ಧರ್ಮ ಗುರುಗಳೂ ಪುರೋಹಿತವರ್ಗದವರೂ ಮನುಷ್ಯನ ಮತ್ತು ಅವನ ಸ್ವಭಾವದ ಬಗ್ಗೆ ಮೂಡಿಸಿದ್ದ ಸಾತ್ತ್ವಿಕ ಮತ್ತು ದೈವಿಕ ಭಾವನೆಗಳ ವಿರುದ್ಧವಾಗಿ ಅಭಿಪ್ರಾಯದ ದಂಗೆಯನ್ನೆ ಎಬ್ಬಿಸಿದಂತಾಯಿತು. ಕನಸಿನ ಮೂಲವನ್ನೂ ಅದರ ಆವಿರ್ಭಾವದ ವಿವಿಧ ಹಂತಗಳನ್ನೂ ವಿವರಿಸಿದ್ದು ಫ್ರಾಯ್ಡನ ಮಹತ್ತರ ಸಾಧನೆ ಗಳಲ್ಲೊಂದು. 20ನೆಯ ಶತಮಾನದ ಆದಿಯಲ್ಲಿ ಫ್ರಾಯ್ಡ್‌ ಪ್ರಕಟಿಸಿದ ಡ್ರೀಮ್ ಇಂಟರ್ಪ್ರಿಟೇಷನ್ (ಸ್ವಪ್ನದ ಅರ್ಥವಿವರಣೆ) ಎಂಬ ವೈಜ್ಞಾನಿಕ ಗ್ರಂಥ ವಿಶ್ವಪ್ರಸಿದ್ಧವಾಗಿದೆ.

ಪ್ರಾಯ್ಡ್‌ ವಿಶಾಲಾರ್ಥದಲ್ಲಿ ಎರಡು ಮುಖ್ಯ ಮೂಲಪ್ರವೃತ್ತಿಗಳನ್ನು (ಇನ್ಸ್ಟಿಂಕ್ಟ್‌) ಗುರುತಿಸಿದ. ಮೊದಲನೆಯದು ಲೈಂಗಿಕ ಪ್ರವೃತ್ತಿ. ಎರಡನೆಯದು ನಾಶಾತ್ಮಕ ಪ್ರವೃತ್ತಿ. ಫ್ರಾಯ್ಡನ ಮತದಲ್ಲಿ ಈ ಎರಡು ಮೂಲಪ್ರವೃತ್ತಿಗಳು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದ್ದೇ ಇವೆ. ವ್ಯಕ್ತಿಯ ಎಲ್ಲ ಹೋರಾಟವೂ ನಡವಳಿಕೆಯೂ ಸುಖಾಪೇಕ್ಷೆಯನ್ನು ಕುರಿತಂಥವೇ. ಕನಸಿಗೆ ಸಂಬಂಧಿಸಿದಂತೆಯೂ ಈ ವಿಚಾರಗಳು ಬಹಳ ಮಟ್ಟಿಗೆ ಹೊಂದಿಕೊಳ್ಳುತ್ತವೆ.

ಶೈಶವಾವಸ್ಥೆಯಲ್ಲಿ ಹಸಿವು, ಭಯ, ಉತ್ಸುಕತೆ ಮುಂತಾದ ಅನೇಕ ಮೂಲ ಪ್ರವೃತ್ತಿಗಳೊಂದಿಗೆ ಬೆರೆತು ಲೈಂಗಿಕ ಪ್ರವೃತ್ತಿ ರೂಪವನ್ನು ತಳೆದು ಕ್ರಿಯಾಶೀಲವಾಗಿರುತ್ತದೆ. ಇದು ಮುಂದೆ ಶಿಶುವಿನಲ್ಲಿ ಅದರ ದೇಹಕ್ಕೂ ಮನಸ್ಸಿಗೂ ತೃಪ್ತಿಯನ್ನುಂಟುಮಾಡುವ ರೀತಿಯಲ್ಲಿ ದೇಹದ ವಿವಿಧ ಭಾಗಗಳಲ್ಲಿ ಕೇಂದ್ರೀಕೃತವಾಗುತ್ತದೆ. ಉದಾಹರಣೆಗೆ ತುಟಿ, ಸ್ತನಾಗ್ರ, ಕೆನ್ನೆ, ತೊಡೆ ಮುಂತಾದುವೆಲ್ಲ ಶಿಶುವಿನ ಲೈಂಗಿಕ ಪ್ರವೃತ್ತಿಯನ್ನು ಪುರೈಸುವ ಸಾಧನೆಗಳಾಗುತ್ತವೆ. ವಯಸ್ಕರ ದೃಷ್ಟಿ ಕೋನದಿಂದ ನೋಡುವುದಾದರೆ ಶಿಶುವನ್ನು ನೀಚ, ಅನೀತಿಯುತ ಗುಣಗಳಿಂದ ಕೂಡಿದ ಬಹುರೂಪಿ ವಕ್ರ (ಪಾಲಿಮಾರ್ಫಸ್ ಪರ್ವರ್ಸ್) ಎನ್ನಬೇಕಾಗುತ್ತದೆ.

ಕಾಲಕ್ರಮದಲ್ಲಿ ಶಿಶು ಬೆಳೆದಂತೆ ಅದು ಸಮಾಜದ ಪ್ರಭಾವಕ್ಕೊಳಪಟ್ಟು ಅದರಲ್ಲಿ ಅಹಂ ರೂಪುಗೊಳ್ಳುತ್ತದೆ. ಹೊಸದಾಗಿ ಮೂಡಿದ ಅಹಮಿಗೂ ಹಿಂದಿನಿಂದ ಬಂದ ಲೈಂಗಿಕ ಪ್ರವೃತ್ತಿಗೂ ಘರ್ಷಣೆ ಅನಿವಾರ್ಯ. ಇದರಲ್ಲಿ ಅಹುಮಿಗೇ ಗೆಲುವಾಗುತ್ತದೆ. ಲೈಂಗಿಕ ಪ್ರವೃತ್ತಿಗಳು ಪ್ರಕಟಗೊಳ್ಳಲು ಅಹಂ ಅವಕಾಶ ಕೊಡುವುದಿಲ್ಲ. ಅವುಗಳನ್ನು ಅದುಮಿಡುತ್ತವೆ. ಇದು ಸು. 6ನೆಯ ವರ್ಷದ ವೇಳೆಗೆ ಪುರ್ಣವಾಗಿ ನಾಶವಾಗಿ ಹೋದಂತೆ ತೋರುತ್ತದೆ. ಆದರೆ ನಿಜವಾಗಿಯೂ ಇದು ನಾಶವಾಗುವುದಿಲ್ಲ. ಇದರ ಅಲ್ಪಾಂಶ, ಪ್ರೀತಿ, ಕೋಮಲ ಸ್ವಭಾವ ಮುಂತಾದ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ.

ವ್ಯಕ್ತಿ ತಾರುಣ್ಯಾವಸ್ಥೆಯನ್ನು ಪ್ರವೇಶಿಸುತ್ತಲೆ, ಹುದುಗಿದ್ದ ಲೈಂಗಿಕ ಪ್ರವೃತ್ತಿ ಪುನಃ ಕ್ರಿಯಾಶೀಲವಾಗುತ್ತದೆ. ಆದರೆ ಲೈಂಗಿಕ ಪ್ರವೃತ್ತಿ ಪ್ರಕಟಗೊಳ್ಳದಿರುವಂತೆ ಅಹಂ ನಿರ್ಬಂಧಿಸುತ್ತದೆ. ಹೀಗೆ ಅಹಂನಿಂದ ನಿರ್ಬಂಧಿಸಲ್ಪಟ್ಟಿದ್ದರೂ ಕ್ರಿಯಾಶೀಲವಾಗಿರುವ ಈ ಲೈಂಗಿಕ ಪ್ರವೃತ್ತಿಯೆ ಸುಪ್ತಚೇತನ ರೂಪಗೊಳ್ಳುವುದಕ್ಕೆ ಕಾರಣ. ಹೀಗೆ ಶೈಶವಾವಸ್ಥೆಯಲ್ಲಿನ ಲೈಂಗಿಕ ಪ್ರವೃತ್ತಿ ದಮಿಸಲ್ಪಡುವುದೇ ಸುಪ್ತಚೇತನದ ಅವಿರ್ಭಾವಕ್ಕೆ ಕಾರಣ. ಹೀಗೆ ಶುರುವಾದ ಸುಪ್ತಚೇತನ ಕ್ರಮೇಣ ಘರ್ಷಣೆಗಳ ಪರಿಣಾಮದಿಂದ ವೃದ್ಧಿಗೊಳ್ಳುತ್ತ ಹೋಗುತ್ತದೆ.

ದಮಿಸಲ್ಪಟ್ಟ ಇಂಥ ಅನೇಕ ಮಾನಸಿಕ ಚಟುವಟಿಕೆಗಳಲ್ಲಿ ಈಡಿಪಸ್ ಕಾಂಪ್ಲೆಕ್ಸ್‌ (ನೋಡಿ- ಈಡಿಪಸ್-ಕಾಂಪ್ಲೆಕ್ಸ್‌) ಒಂದು. ಇದು ಶಿಶುವಿನಲ್ಲಿ ಅದು ಮೊಲೆಯುಣ್ಣುವ ವಯಸ್ಸಿನಲ್ಲೆ ತನ್ನ ತಾಯಿಯ ಬಗ್ಗೆ ಮೂಡಿಬರುತ್ತದೆ. ಈ ಭಾವನೆ ವ್ಯಕ್ತಿಯ ತಾರುಣ್ಯಾವಸ್ಥೆಯಲ್ಲಿ ವಿಶೇಷವಾಗಿದ್ದು, ತನ್ನ ತಾಯನ್ನೇ ಕಾಮಿಸುವ ಸುಪ್ತಚೇತನದ ಇಚ್ಛೆಯ ರೂಪದಲ್ಲಿ ಪ್ರಕಟಗೊಳ್ಳುತ್ತದೆ.

ಫ್ರಾಯ್ಡನ ಸಿದ್ಧಾಂತದ ಮುಖ್ಯಾಂಶಗಳು ಕೆಳಕಂಡಂತಿದೆ : 1. ಸುಪ್ತಚೇತನ; ವ್ಯಕ್ತಿಯ ಮನಸ್ಸಿನ ಹೆಚ್ಚು ಭಾಗ ಸುಪ್ತಚೇತನದಲ್ಲಡಗಿರುವುದಲ್ಲದೆ, ಪ್ರಮುಖ ನಿರ್ಧಾರಗಳು ಸಹ ಸುಪ್ತಚೇತನದಿಂದಲೇ ನಿರ್ದೇಶಿಸಲ್ಪಟ್ಟಿರುತ್ತವೆ. ನಮ್ಮ ನಿಜವಾದ ವ್ಯಕ್ತಿತ್ವ ನಮ್ಮ ಸುಪ್ತಚೇತನದಲ್ಲೇ ಅಡಕವಾಗಿರುತ್ತದೆ. ನಮ್ಮ ಚೇತನಾವಸ್ಥೆ ಇಡೀ ಮನಸ್ಸಿನ ಎಲ್ಲೋ ಒಂದು ಅಲ್ಪಾಂಶ. ಸಮಾಜ ಮತ್ತು ನೈತಿಕತೆಯ ದೃಷ್ಟಿಯಿಂದ ನೋಡಿದಾಗ ಸುಪ್ತಚೇತನದಲ್ಲಿ ತುಂಬಿರುವ ವಿಚಾರಗಳು ನಿಂದಾತ್ಮಕವಾಗಿವೆ. ಏಕೆಂದರೆ ವ್ಯಕ್ತಿ ಹುಟ್ಟುತ್ತಲೇ ಪಾಶವೀ ಗುಣಗಳಿಂದ ಕೂಡಿರುತ್ತಾನೆ. ಮುಂದೆ ಅನೇಕ ಕಹಿ ಅನುಭವಗಳು ಸೇರುತ್ತ ಹೋಗುತ್ತವೆ. ಇಡೀ ಮನಸ್ಸಿನ ಯಾವ ಒಂದು ಭಾಗವನ್ನು ಚೇತನದ ಸಹಾಯದಿಂದ ಗುರುತಿಸಲು ಸಾಧ್ಯವೋ ಆ ಭಾಗವೇ ಅಹಂ. ಸುಪ್ತಚೇತನದಲ್ಲಿ ಅಡಗಿರುವ ಲೈಂಗಿಕ ಪ್ರವೃತ್ತಿಯೂ ದುಷ್ಟ. ಅನೈತಿಕ, ಅಸಾಮಾಜಿಕ ವಿಚಾರಗಳೂ ಅಹಂಗೆ ಭಯಂಕರವಾಗಿ ಕಾಣುತ್ತವೆ.

2. ರೋಧಕ (ಸೆನ್ಸರ್): ಅನಾರೋಗ್ಯಕಾರಿ ಅಥವಾ ಅಸೌಖ್ಯಕಾರಿ ಇಚ್ಛೆಗಳು ರೋಧಕದ ನಿರ್ಬಂಧಕ್ಕೂಳಪಟ್ಟು ಸುಪ್ತಚೇತನದಲ್ಲಿ ಬಂಧಿತವಾಗಿರುತ್ತವೆ. ವ್ಯಕ್ತಿ ಎಚ್ಚರವಾಗಿರುವಾಗ ರೋಧಕದ ಕ್ರಿಯೆ ಎಷ್ಟು ದಕ್ಷತೆಯಿಂದ ಕೂಡಿರುತ್ತದೆಂದರೆ, ಸುಪ್ತಚೇತನದಲ್ಲಿರುವ ಯಾವ 
ವಿಷಯವನ್ನೂ ಅದು ಚೇತನಕ್ಕೆ ಬಿಡುವುದಿಲ್ಲ. ಸುಪ್ತಚೇತನದಲ್ಲಿರುವ ವಿಷಯದ ಬಗ್ಗೆ ವ್ಯಕ್ತಿಗೆ ಏನೂ ತಿಳಿದಿರುವುದಿಲ್ಲ. ಆದರೂ ದಮಿಸಲ್ಪಟ್ಟ ಹಾಗೂ ಗುಪ್ತವಾಗಿರುವ ಸುಪ್ತಚೇತನದ ವಿಷಯಗಳು ಮಾತಾಡುವಾಗಲೂ ಬರೆವಣಿಗೆಯಲ್ಲೂ ಹಗಲುಗನಸುಗಳೇ ಮುಂತಾದ 
ಅನೇಕ ರೂಪಗಳಲ್ಲಿ ಸಂದರ್ಭಾನುಸಾರ, ಸುಪ್ತಚೇತನದಿಂದ ಚೇತನಕ್ಕೆ ನುಸುಳಿಕೊಂಡು ಬಂದುಬಿಡುತ್ತವೆ.

ಚೇತನ ಅನೇಕ ವೇಳೆ ನಿರ್ವಿಕಾರವಾಗಿರುತ್ತದೆ. ಪ್ರಬಲಶಕ್ತಿಗಳಿಂದ ಸುಪ್ತಚೇತನ ಮತ್ತು ರೋಧಕಗಳ ನಡುವಣ ಘರ್ಷಣೆಗೆ ಚೇತನ ಬಲಿಯಾಗಿ ಅನೇಕ ಬಾರಿ ಕಷ್ಟಗಳಿಗೂ ಗುರಿಯಾಗುತ್ತದೆ. ಸುಪ್ತಚೇತನದಲ್ಲಿನ ವಿಷಯ ಪ್ರಕಟಗೊಳ್ಳಲು ಪ್ರಯತ್ನಿಸಿದರೆ ರೋಧಕ ಅಡ್ಡಿಬರುತ್ತದೆ.
ಆದರೆ ನಿದ್ರಾವಸ್ಥೆ ರೋಧಕದ ಸಮರ್ಪಕತೆಯನ್ನೂ ಎಚ್ಚರಿಕೆಯನ್ನೂ ಕುಗ್ಗಿಸಿ ಸುಪ್ತಚೇತನದ ವಿಷಯಗಳು ಚೇತನವನ್ನು ನಿರಾತಂಕವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ. ಆದರೂ ಸ್ವಪ್ನದಲ್ಲೂ ರೋಧಕದ ದಕ್ಷತೆಯನ್ನು ಕಾಣಬಹುದು.

ಸುಪ್ತಚೇತನದಲ್ಲಿರುವ ಲೈಂಗಿಕ ಆಸೆಗಳು ಅಸಮರ್ಪಕ ರೋಧಕವನ್ನು ಸುಲಭವಾಗಿ ಮೋಸಗೊಳಿಸಿ ಚೇತನವನ್ನು ಪ್ರವೇಶಿಸುತ್ತವೆ. ಸುಪ್ತಚೇತನದಲ್ಲಿನ ನಿಂದಾತ್ಮಕ ಅವ್ಯಕ್ತವಿಷಯ (ಲೇಟೆಂಟ್ ಕಂಟೆಂಟ್) ಆಗ ಚಿತ್ರಗಳ ರೂಪದಲ್ಲಿ ವ್ಯಕ್ತವಿಷಯವಾಗಿ (ಮ್ಯಾನಿಫೆಸ್ಟ್‌ ಕಂಟೆಂಟ್) ಕಾಣಿಸಿಕೊಳ್ಳುತ್ತದೆ. ಅಸಮರ್ಪಕ ರೋಧಕವನ್ನು ಮೋಸಗೊಳಿಸುವುದಕ್ಕಾಗಿಯೇ ಅದು ಈ ವೇಷ ತಳೆಯುತ್ತದೆ. ಹೀಗೆ ಚಿತ್ರರೂಪದಲ್ಲಿ ಕಾಣಿಸಿಕೊಳ್ಳುವ ವ್ಯಕ್ತವಿಷಯ (ಸ್ವಪ್ನ) ಎಷ್ಟು ಸಂಕೀರ್ಣವಾಗಿರುತ್ತದೆ ಎಂದರೆ, ರೋಧಕಕ್ಕೆ ಅದರ ಹಿಂದಿರುವ ಅರ್ಥ ತತ್ಕ್ಷಣ ಹೊಳೆಯುವುದಿಲ್ಲ. ಆದ್ದರಿಂದ ಯಾವುದು ಕನಸು ಎನಿಸಿಕೊಳ್ಳುತ್ತದೋ ಅದು ಸುಪ್ತಚೇತನಕ್ಕೂ ರೋಧಕಕ್ಕೂ ನಡುವಣ ಸಮನ್ವಯ.

ಸ್ವಪ್ನದ ರಚನೆಯಲ್ಲಿ ಚೇತನವೂ ತನಗರಿವಿಲ್ಲದೆಯೇ ತನ್ನ ನೆರವು ನೀಡುತ್ತಿರುತ್ತದೆ. ಹೇಗೆಂದರೆ ಸುಪ್ತಚೇತನದ ವಿಷಯಗಳು ಪ್ರಕಟಗೊಳ್ಳಲು, ಚೇತನಾವಸ್ಧೆಯಲ್ಲಿ ಗ್ರಹಿಸಿದ್ದ ಅನುಭವಗಳೇ ಸಾಧನಗಳಾಗುತ್ತವೆ. ಶೈಶವದ ಬಹುರೂಪಿ ವಕ್ರಗಾಮಿಗಳಾದ ಅನೈತಿಕ ಲೈಂಗಿಕ ಸಂಬಂಧ, ಸಮೀಪವರ್ತಿಗಳ ಮರಣ ಮುಂತಾದ ಇಚ್ಛೆಗಳು ನಿದ್ರಿತವ್ಯಕ್ತಿಯಲ್ಲಿ ನೇರವಾಗಿಯೇ ಕಾಣಿಸಿಕೊಂಡರೆ ಅದು ಅವನ ನಿದ್ರೆಯನ್ನು ಭಂಗಗೊಳಿಸಬಹುದು ಅಥವಾ ಅವನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಹುದು. ವ್ಯಕ್ತಿಯನ್ನು ಇದರಿಂದ ತಪ್ಪಿಸುವುದಕ್ಕಾಗಿ, ಸುಪ್ತಚೇತನದ ವಿಷಯಗಳು ಚೇತನಕ್ಕೆ ಒಪ್ಪಿಗೆಯಾಗುವ ಮಾರ್ಗದಲ್ಲಿ ವೇಷ ಮರೆಸಿಕೊಂಡು ಕಾಣಿಸಿಕೊಳ್ಳುತ್ತವೆ. ಹೀಗೆ ಸುಪ್ತಚೇತನದ ಯಾವ ವಿಷಯ ಚೇತನಕ್ಕೆ ಬರಲು ಹೋರಾಟ ನಡೆಸಿರುವುದೋ ಅದನ್ನೆ ಫ್ರಾಯ್ಡ್‌ ಇಚ್ಛೆ ಎಂದು ಕರೆದಿದ್ದಾನೆ. 

ವ್ಯಕ್ತಿ ಎಚ್ಚರವಾಗಿರುವಾಗ ರೋಧಕ ಎಷ್ಟು ಪ್ರಬಲವಾಗಿರುತ್ತದೆಂದರೆ, ಸುಪ್ತಚೇತನದ ಇಚ್ಛೆಗಳ ಅರಿವು ಆತನಿಗೆ ಸ್ವಲ್ಪವೂ ಇರುವುದಿಲ್ಲ. ಆದರೆ ನಿದ್ರಾವಸ್ಥೆಯಲ್ಲಿ ಸುಪ್ತಚೇತನದ ವಿಷಯಗಳು ಚೇತನದ ರಂಗವನ್ನು ಪ್ರವೇಶಿಸುತ್ತವೆ. ಆದರೆ ರೋಧಕ ಆಗಲೂ ಸಾಕಷ್ಷು ಎಚ್ಚರವಾಗಿರುವುದರಿಂದ ಕನಸುಗಳು ವಿಕೃತಗೊಂಡು ಕಾಣಿಸಿಕೊಳ್ಳುತ್ತವೆ.

ಯಾವುದು ಕನಸೋ ಅದನ್ನು ವ್ಯಕ್ತವಿಷಯ ಎಂದು ಕರೆಯಲಾಗಿದೆ. ವ್ಯಕ್ತವಿಷಯ ಯಾವುದರಿಂದ ಪ್ರೇರೇಪಿತವಾಗಿಯೋ, ವ್ಯಕ್ತವಿಷಯದಲ್ಲಿ ಯಾವುದು ಸ್ಪಷ್ಟವಾಗಿ ಕಂಡುಬರುವುದಿಲ್ಲವೋ ಅದು ಅವ್ಯಕ್ತವಿಷಯ. ಆದ್ದರಿಂದ ವ್ಯಕ್ತ ವಿಷಯದ ಆಧಾರದ ಮೇಲೆ ಅವ್ಯಕ್ತವಿಷಯವನ್ನು ತಿಳಿಯುವುದೇ ಸ್ವಪ್ನವಿಶ್ಲೇಷಣೆ. ವ್ಯಕ್ತವಿಷಯಕ್ಕೂ ಅವ್ಯಕ್ತವಿಷಯಕ್ಕೂ ನಡುವೆ ಇರಬಹುದಾದ ತರ್ಕಬದ್ಧ ಸಂಬಂಧವನ್ನು ಹುಡುಕುವುದರ ಜೊತೆಗೆ ಸ್ವಪ್ನಿಯ ಮನಸ್ಸಿನಲ್ಲಿ ಆತನ ಸ್ವಪ್ನಕ್ಕೆ ಸಂಬಂಧಿಸಿದಂತೆ ಅಡಗಿರುವ ಇತರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದೂ ವಿಶ್ಲೇಷಣೆಯ ಉದ್ದೇಶ. ಫ್ರಾಯ್ಡ್‌ನ ಪ್ರಕಾರ ಸ್ವಪ್ನದಲ್ಲಿ ಮುಖ್ಯವಾದ ಭಾವನೆ ವಿಲಕ್ಷಣವಾಗಿಯೂ ಅನಪೇಕ್ಷಿತ ರೀತಿಯಲ್ಲೂ ಅಲ್ಲದೆ ತರ್ಕವಿರುದ್ಧವಾಗಿಯೂ ಇರುತ್ತದೆ.

ನಿದ್ರಾವಸ್ಧೆಯಲ್ಲಿ ಹೊರಗಿನಿಂದ ಬರುವ ಪ್ರಚೋದನೆಗಳಿಗೆ ಮನಸ್ಸು ತೋರುವ ಪ್ರತಿಕ್ರಿಯೆಯೇ ಕನಸು. ಆದರೆ ಈ ಪ್ರತಿಕ್ರಿಯೆ ಇಡೀ ಸ್ವಪ್ನದಲ್ಲಿ ಎಲ್ಲೋ ಸ್ವಲ್ಪ ಭಾಗ ಮಾತ್ರ. ಕೇವಲ ಪ್ರಚೋದನೆಯನ್ನೇ ಯಥಾವತ್ ಪ್ರತಿನಿಧಿಸುವುದೇ ಕನಸಲ್ಲ. ಅದಕ್ಕೆ ಬದಲಾಗಿ ಅದು ಪ್ರಚೋದನೆಯ ಸುತ್ತ ಒಂದು ಕಥೆಯನ್ನು ಹೆಣೆಯುತ್ತದೆ. ಆ ಕಥೆಯಲ್ಲಿ ಮೂಲಪ್ರಚೋದನೆ ಸ್ವಷ್ಟವಾಗಿ ಕಾಣಿಸಿಕೊಳ್ಳಬಹುದು; ಅಥವಾ  ಕಾಣಿಸಿಕೊಳ್ಳದಿರಬಹುದು. ಪ್ರಚೋದನೆಗಿಂತ, ಪ್ರಚೋದನೆ ಉಂಟು ಮಾಡುವ ಸಂಗತಿಗಳು ಸ್ವಪ್ನದ ವ್ಯಕ್ತವಿಷಯದಲ್ಲಿ ಪ್ರಧಾನ 
ಪಾತ್ರವಹಿಸುತ್ತವೆ.

ಅವ್ಯಕ್ತವಿಷಯ ವ್ಯಕ್ತವಿಷಯವಾಗಿ ರೂಪುಗೊಳ್ಳುವ ವಿಧಾನದಲ್ಲಿ ಅನೇಕ ಹಂತಗಳುಂಟು. ಇವನ್ನು ಫ್ರಾಯ್ಡ್‌ ಸ್ವಪ್ನರಚನೆ (ಡ್ರೀಂವರ್ಕ್) ಎಂದು ಕರೆದಿದ್ದಾನೆ.

3. ಸಂಕ್ಷೇಪಣೆ: ಅವ್ಯಕ್ತವಿಷಯದಲ್ಲಿ ಅನೇಕ ವಿಷಯಗಳಿರುತ್ತವೆ. ಆದರೆ ಅಷ್ಟೂ ವ್ಯಕ್ತವಿಷಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮುಖ್ಯವಾದ ಕೆಲವು ಅಂಶಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಾವು ಕಾಣುವ ಕನಸು ಅದರ ಹಿಂದಿರುವ ಅವ್ಯಕ್ತವಿಷಯದ ಒಂದು ಸಂಕ್ಷಿಪ್ತ ವಿವರಣೆ. ಈ ಸಂಕ್ಷೇಪಣೆಯ ಕಾರ್ಯ ಅನೇಕ ರೀತಿಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಮುಖ್ಯವಾದವು ಇವು:
ಎ. ಅವ್ಯಕ್ತವಿಷಯದಲ್ಲಿನ ಕೆಲವು ಅಮುಖ್ಯ ಸಂಗತಿಗಳು ವ್ಯಕ್ತವಿಷಯದಲ್ಲಿ ಬಿಟ್ಟುಹೋಗುತ್ತವೆ.
ಬಿ. ಅವ್ಯಕ್ತವಿಷಯದಲ್ಲಿ ಬೇರೆ ಬೇರೆ ಅಂಶಗಳಿರುತ್ತವೆ. ಆದರೆ ಆ ಎಲ್ಲ ಅವ್ಯಕ್ತ ವಿಷಯಗಳ ಸ್ವಲ್ಪ ಭಾಗಗಳು ಮಾತ್ರ ವ್ಯಕ್ತವಿಷಯದಲ್ಲಿ ಕಾಣಿಸಿಕೊಳ್ಳುತ್ತವೆ.
ಸಿ. ಸಮಾನ ಅಂಶಗಳಿಂದ ಕೂಡಿದ ಅನೇಕ ಅವ್ಯಕ್ತವಿಷಯಗಳು ಪರಸ್ಪರ ಮಿಶ್ರಗೊಂಡು ವ್ಯಕ್ತವಿಷಯದಲ್ಲಿ ಒಂದೇ ಕಥೆಯ ರೂಪದಲ್ಲಿ ವ್ಯಕ್ತಗೊಳ್ಳುತ್ತವೆ.
ಡಿ. ಕೊನೆಯದಾಗಿ ಯಾವುದಾದರೊಂದು ಪ್ರಧಾನ ಇಚ್ಛೆಯ ಸುತ್ತ ಅನೇಕ ಬೇರೆ ಬೇರೆ ಅವ್ಯಕ್ತವಿಷಯಗಳು ಹೆಣೆದುಕೊಂಡಿರುತ್ತವೆ. ಆದ್ದರಿಂದ ಒಂದು ಕನಸನ್ನು ವಿಶ್ಲೇಷಿಸಿದಾಗ ಅದರಲ್ಲಿ ಇನ್ನೂ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ತಚೇತನದಲ್ಲಿ ಅಡಗಿರುವ 

ವಿಷಯಗಳನ್ನು ಕಾಣಬಹುದು.
ಆಧುನಿಕ ಕಲಾಕಾರ ಚಿತ್ರವನ್ನು ಬಿಡಿಸುವಾಗ ಎಲ್ಲ ಸೂಕ್ಷ್ಮ ಭಾಗಗಳನ್ನೂ ವಿವರವಾಗಿ ಚಿತ್ರಿಸಲು ಹೋಗುವುದಿಲ್ಲ. ಅವು ವೀಕ್ಷಕನ ಕಲ್ಪನೆಗೆ ಸೇರಿದ್ದು. ಇದೇ ರೀತಿಯಲ್ಲಿ ಸ್ವಪ್ನಗಳಲ್ಲೂ ಅವ್ಯಕ್ತವಿಷಯಗಳು ಸೂಚ್ಯವಾಗಿಯೂ ವಿವರವಾಗಿಯೂ ಇರುವುದಿಲ್ಲ.
ಅವ್ಯಕ್ತವಿಷಯದಲ್ಲಿ ಪ್ರಧಾನವಾಗಿರುವ ಇಚ್ಛೆ ವ್ಯಕ್ತವಿಷಯದಲ್ಲಿ ಗೌಣವಾಗಿರುತ್ತದೆ; ಅವ್ಯಕ್ತವಿಷಯದಲ್ಲಿ ಗೌಣವಾಗಿರುವ ಇಚ್ಛೆ ವ್ಯಕ್ತವಿಷಯದಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಿಷಯಪಲ್ಲಟನೆ ಎಂದು ಹೆಸರು.
4. ನಾಟಕೀಕರಣ (ಡ್ರಾಮಟೈಸೇಷನ್): ಅವ್ಯಕ್ತವಿಷಯದಲ್ಲಿರುವ ಆಲೋಚನೆಗಳು ವ್ಯಕ್ತವಿಷಯದಲ್ಲಿ ಚಿತ್ರಗಳ ರೂಪದಲ್ಲಿ ಪರಿವರ್ತಿಸಲ್ಪಡುವುದೇ ನಾಟಕೀಕರಣ. ಇದು ಸ್ವಪ್ನರಚನೆಯ ಮೂರನೆಯ ಲಕ್ಷಣ. ಕನಸಿಗೆ ತನ್ನಲ್ಲಿರುವ ಅಭಿಪ್ರಾಯವನ್ನು ತರ್ಕಬದ್ಧವಾಗಿ 

ವ್ಯಕ್ತಪಡಿಸಲು ಸರಿಯಾದ ಯಾವ ಸಾಧನವೂ ಇಲ್ಲ. ಆದ್ದರಿಂದ ಅವ್ಯಕ್ತಭಾವನೆಗಳು ಚಿತ್ರಗಳ ರೂಪದಲ್ಲಿ ಪ್ರಕಟಗೊಳ್ಳುತ್ತವೆ.
5. ಸಂಕೇತನಿರ್ಮಾಣ (ಸಿಂಬಲೈಸೇಷನ್) ಮತ್ತೊಂದು ಮುಖ್ಯ ಲಕ್ಷಣ. ಸ್ವಪ್ನಾಲೋಚನೆಯೆಲ್ಲವೂ ಸಂಕೇತಗಳ ಮೂಲಕವೇ ಪ್ರಕಟಗೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಸುಪ್ತಚೇತನದಲ್ಲಿ ಅಡಕವಾಗಿರುವ ಲೈಂಗಿಕ ಭಾವನೆಗಳು ಸಾಂಕೇತಿಕವಾಗಿಯೇ 

ಪ್ರಕಟಗೊಳ್ಳುತ್ತವೆ. ಮಕ್ಕಳನ್ನು ಪಡೆಯಬೇಕು. ಅವನ್ನು ಪಾಲಿಸಬೇಕು ಎಂಬ ಬಂಜೆಯ ಆಸೆಗಳು ಸ್ವಪ್ನದಲ್ಲಿ ಆಕೆ ಮುದ್ದು ಹಾಗೂ ಸಾಕುಪ್ರಾಣಿಗಳೊಂದಿಗಿರುವಂತೆ ಕಂಡು ಬರಬಹುದು. ತಂದೆ ತಾಯಿ, ಸಹೋದರ ಸಹೋದರಿ, ಜನನ ಮರಣ ಮುಂತಾದ ಅನೇಕ 

ವಿಷಯಗಳೂ ಸಂಕೇತಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇಂಥ ಅನೇಕ ಸಂಕೇತಗಳನ್ನು ಫ್ರಾಯ್ಡ್‌ ವಿವರಿಸಿದ್ದಾನೆ. ಕೆಲವು ಉದಾಹರಣೆಗಳು ಇವು: ಮನೆ ಮಾನವನ ಆಕೃತಿ ಸೂಚಕ; ನುಣುಪುಗೋಡೆ ಪುರುಷಸೂಚಕ; ಮನೆಗೆ ಉಪ್ಪರಿಗೆಯ ಮೊಗಸಾಲೆ ಯಿದ್ದರೆ ಅದು 

ಸ್ತ್ರೀ ಸೂಚಕ; ನೀರು ಜನನಕ್ಕೆ ಸಂಬಂಧಪಟ್ಟ ಭಾವನೆಗಳ ಪ್ರತೀಕ: ಮನೆಯ ಮುಂದಿನ ಮೆಟ್ಟಲುಗಳನ್ನು ಇಳಿಯುತ್ತಿರುವಂತೆ ಕಂಡರೆ ಅದು ಸಾವಿನ ಸೂಚನೆ; ಸವಾರಿಯೂ ಬೆಟ್ಟದ ಪ್ರದಕ್ಷಿಣೆಯೂ ಕನಸುಗಾರನ ಮಹತ್ವಾಕಾಂಕ್ಷೆಯ ದ್ಯೋತಕ.
ಬಹಳ ಹೆಚ್ಚಿನ ಸಂಕೇತಗಳು ಲೈಂಗಿಕತೆಯತ್ತಲೇ ಬೆಟ್ಟು ಮಾಡುತ್ತವೆ. ಉದಾಹರಣೆಗೆ ಮರಗಳು, ಸೀಸದ ಕಡ್ಡಿ, ಕತ್ತಿ, ಭರ್ಜಿ, ಚಾಕು, ಛತ್ರಿ. ಹಾವು ಮುಂತಾದವೆಲ್ಲ ಪುರುಷರ ಲಿಂಗದ ಸಂಕೇತ. ಹಣ್ಣು, ಪೆಟ್ಟಿಗೆ, ಚೀಲ, ಖಾಲಿಸೀಸೆ, ಮೇಜಿನ ಡ್ರಾಯರು, ಅಲಮಾರು 

ಮುಂತಾದವೆಲ್ಲ ಯೋನಿಯ ಸಂಕೇತ. ರೈಲಿನಲ್ಲಿ (ವಾಹನದಲ್ಲಿ) ಪ್ರಯಾಣ, ಗೋಡೆಯ ಮೇಲೆ ಕುಳಿತ ಭಂಗಿ, ಕುದುರೆ ಅಥವಾ ಸೈಕಲ್ ಸವಾರಿ, ಶಿಲುಬೆಯ ದೃಶ್ಯ-ಇವು ಸಂಭೋಗ ಕ್ರಿಯೆಯ ಸೂಚನೆ. ಎತ್ತು, ಕುದುರೆ, ನಾಯಿ ಮತ್ತು ಕೆಲವು ಧಾರ್ಮಿಕ ಸಂಕೇತಗಳೂ 

ಲೈಂಗಿಕ ಭಾವನೆಗಳನ್ನೇ ಸಂಕೇತಿಸುತ್ತವೆ. ಯಾರೋ ಕೈಯಲ್ಲಿ ಚಾಕು ಹಿಡಿದು ತಿವಿಯಲು ಬಂದಂತೆ ಹೆಣ್ಣುಮಕ್ಕಳು ಕಾಣುವ ವ್ಯಾಕುಲಪುರ್ಣ ಸ್ವಪ್ನಗಳೂ ಲೈಂಗಿಕ ಇಚ್ಛೆಯ ಪ್ರತೀಕವೇ. ವಯಸ್ಸಾದ ಹೆಂಗಸನ್ನು ಸಮೀಪಿಸುತ್ತಿರುವಂತೆ ಕಂಡರೆ ಅದು ಸ್ವಪ್ನಿಯ ಈಡಿಪಸ್ 

ಕಾಂಪ್ಲೆಕ್ಸನ್ನು ಸೂಚಿಸುತ್ತದೆ.
ಹೀಗೆ ಅಸಂಖ್ಯ ಸಂಕೇತಗಳ ಮೂಲಕ ವ್ಯಕ್ತಿಯ ಅಸಭ್ಯ, ದುಷ್ಟ ಹಾಗೂ ಅನೈತಿಕ ಭಾವನೆಗಳು ಸ್ವಪ್ನದಲ್ಲಿ ಪರೋಕ್ಷವಾಗಿ ಪ್ರಕಟಗೊಳ್ಳುತ್ತವೆ.
6. ಪುನರ್ನಿರ್ಮಾಣ (ಸೆಕಂಡರಿ ಇಲ್ಯಾಬೊರೇಷನ್) ಸ್ವಪ್ನ ರಚನೆಯ ಇನ್ನೊಂದು ಕ್ರಿಯೆ. ಸುಪ್ತಚೇತನದಲ್ಲಿ ಅಡಕವಾಗಿರುವ ಅನಾರೋಗ್ಯಕಾರಿ ಇಚ್ಛೆಗಳು ಚೇತನಕ್ಕೂ ಬಂದು, ಚೇತನದ ಸಮತೋಲವನ್ನು ಕೆಡಿಸದಂತೆ ನೋಡಿಕೊಳ್ಳುವುದು ರೋಧಕದ ಮುಖ್ಯ ಕರ್ತವ್ಯ. 

ಕನಸುಗಳು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಚಿತ್ರಗಳಾದರೂ ಈ ಚಿತ್ರಗಳು ತರ್ಕಬದ್ಧವಾಗಿಯಾಗಲಿ, ಕ್ರಮಬದ್ಧವಾಗಿಯಾಗಲಿ ಜೋಡಿಸಲ್ಪಟ್ಟಿರುವುದಿಲ್ಲ. ಈ ಜೋಡಣೆಯ ಮತ್ತು ಸಂಪಾದನೆ (ಎಡಿಟಿಂಗ್) ಕೆಲಸವನ್ನು ಸ್ವಪ್ನದ ಪುನರ್ನಿರ್ಮಾಣ ಕ್ರಿಯೆ 

ನಿರ್ವಹಿಸುತ್ತದೆ. ಇದು ನಿರ್ವಹಿಸುವ ಮತ್ತೊಂದು ಕರ್ತವ್ಯವೆಂದರೆ, ಅವ್ಯಕ್ತ ವಿಷಯಗಳೆಲ್ಲವನ್ನೂ ಈ ರೀತಿ ಕಥೆಯ ರೂಪಕ್ಕೆ ಒಳಪಡಿಸುವ ಕ್ರಿಯೆ ಅನುಚೇತನದ ಹಂತದಲ್ಲಿ ನಡೆಯುತ್ತದೆ. ಇದೇ ಪುನರ್ನಿರ್ಮಾಣಕ್ರಿಯೆ. ಕನಸನ್ನು ವಾಲ್ಟ್‌ ಡಿಸ್ನಿಯ ವ್ಯಂಗ್ಯಚಿತ್ರಗಳಿಗೆ 

ಹೋಲಿಸಬಹುದು. ಇಲ್ಲಿ ಚಿತ್ರಕ್ಕಿಂತ ಅದರ ಹಿಂದೆ ಅಡಗಿರುವ ಅರ್ಥ ಮುಖ್ಯ. ಆದ್ದರಿಂದಲೇ ವಿಶ್ಲೇಷಕನಿಗೆ ವ್ಯಕ್ತವಿಷಯ ಗೌಣ. ಅವನ ದೃಷ್ಟಿ ಯಾವಾಗಲೂ ಅವ್ಯಕ್ತವಿಷಯದ ಕಡೆಗೇ ಇರುತ್ತದೆ.
ಹೀಗೆ ಕನಸು ಅವ್ಯಕ್ತವಿಷಯದ ಅಸ್ಪಷ್ಟ ಹಾಗೂ ವಿಕೃತರೂಪ. ಈ ದೃಶ್ಯಗಳನ್ನು ವಿಭಜಿಸಿ ಅದರ ಹಿಂದೆ ಅಡಕವಾಗಿರುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದೇ ವಿಶ್ಲೇಷಕನ ಕೆಲಸ.
ಕನಸುಗಳು ಭೌತಿಕ ಹಾಗೂ ಮಾನಸಿಕ ಪ್ರಚೋದನೆಗಳೆರಡರಿಂದಲೂ ಉಂಟಾಗುತ್ತವೆ. ಭೌತಿಕ ಪ್ರಚೋದನೆಗಳು ವ್ಯಕ್ತಿ ನಿದ್ರಿಸುತ್ತಿರುವಾಗ ಅವನ ಇಂದ್ರಿಯಗಳೊಂದಿಗೆ ಸಂಪರ್ಕವೇರ್ಪಡಿಸಿಕೊಂಡಾಗ ಆತನಲ್ಲಿ ಕನಸನ್ನುಂಟು ಮಾಡುತ್ತವೆ. ನಿದ್ರಿಸುತ್ತಿರುವ ವ್ಯಕ್ತಿಯ 

ಕಿವಿಯ ಬಳಿ ನೊಣ ಗುಯ್ ಗುಟ್ಟುತ್ತ ಹಾರಾಡುತ್ತಿದ್ದರೆ ಅದು ಅವನಲ್ಲಿ ಜಲಪಾತದ ಸ್ವಪ್ನವನ್ನೊ ಬಿರುಗಾಳಿಯ ಸ್ವಪ್ನವನ್ನೊ ಉಂಟು ಮಾಡಬಹುದು. ಒಬ್ಬ ವಿದ್ಯಾರ್ಥಿ ಚಲನಚಿತ್ರದ ಎರಡನೆಯ ಪ್ರದರ್ಶನ ನೋಡಿ ಕೊಠಡಿಗೆ ಹಿಂದಿರುಗಿದ. ಆ ವೇಳೆಗೆ ಆತನ ಸ್ನೇಹಿತ 

ಕೊಠಡಿಯ ಬಾಗಿಲು ಮುಚ್ಚಿ ಮಲಗಿದ್ದ. ವಿದ್ಯಾರ್ಥಿ ಎರಡು ಮೂರು ಬಾರಿ ಬಾಗಿಲನ್ನು ಮೆತ್ತಗೆ ತಟ್ಟಿದರೂ ಸ್ನೇಹಿತನಿಗೆ ಎಚ್ಚರವಾಗಲಿಲ್ಲ. ಅನಂತರ ಕಿಟಕಿಯ ಬಳಿ ಬಂದು, ಮಲಗಿದ್ದ ಸ್ನೇಹಿತನ ಮುಖದ ಮೇಲೆ ಕೈಲಿದ್ದ ಟಾರ್ಚಿನಿಂದ ಬೆಳಕು ಬೀರಿ, ಕಿಟಕಿಯ 

ಬಾಗಿಲುಗಳನ್ನು ಜೋರಾಗಿ ಬಡಿದ. ಇದರಿಂದ ಮಲಗಿದ್ದ ಸ್ನೇಹಿತ ಗಾಬರಿಗೊಂಡವನಾಗಿಯೂ ದಿಗ್ಬ್ರಾಂತನಾಗಿಯೂ ಎದ್ದುಕೂತ. ಒಂದು ಕ್ಷಣ ಆತನಿಗೆ ಏನೂ ತೋಚಲಿಲ್ಲ. ಅನಂತರ ಎದ್ದು ಬಾಗಿಲು ತೆರೆದ. ಭಯಂಕರವಾದ ಗುಡುಗು, ಮಿಂಚು, ಬಿರುಗಾಳಿಗಳಿಂದ 

ಕೂಡಿದ ಮಳೆಗೆ ಸಿಕ್ಕಿಕೊಂಡಿದ್ದಂತೆ ತನಗೊಂದು ಕನಸಾಯಿತೆಂದು ಆತ ಸ್ವಲ್ಪ ಹೊತ್ತಿನ ಅನಂತರ ವಿವರಿಸಿದ. ಬಾಗಿಲು ಬಡಿತದ ಸದ್ದು, ಟಾರ್ಚ್ ಬೆಳಕು-ಈ ಬಾಹ್ಯ ಪ್ರಚೋದನೆಯಿಂದಾಗಿ ಆತನಿಗೆ ಈ ಬಗೆಯ ಕನಸಾಯಿತು. ಇದೇ ರೀತಿಯಲ್ಲಿ ಅಜೀರ್ಣ, ಮಲಬದ್ಧತೆ, 

ದೇಹದ ಅಂಗಾಂಗಗಳಲ್ಲಿನ ಅಸೌಖ್ಯ. ಸುತ್ತಮುತ್ತ ನಡೆಯುತ್ತಿರುವ ಸದ್ದುಗದ್ದಲ ಮುಂತಾದ ಅನೇಕ ಬಾಹ್ಯ ಪ್ರಚೋದನೆಗಳು ನಿದ್ರಿಸುವ ವ್ಯಕ್ತಿಯಲ್ಲಿ ಕನಸುಗಳನ್ನುಂಟುಮಾಡುತ್ತವೆ.
ಆದರೂ, ಬಹು ಹೆಚ್ಚಿನ ಕನಸುಗಳು ಭೌತಿಕ ಪ್ರಚೋದನೆಗಳಿಗಿಂತ ಮಾನಸಿಕ ಪ್ರಚೋದನೆಗಳಿಂದಲೇ ಉತ್ಪನ್ನವಾಗುತ್ತವೆ. ಉದಾಹರಣೆಗೆ, ಈಡೇರದ ಬಂiÀÄಕೆಗಳು, ಭಯ, ಉದ್ವಿಗ್ನತೆ, ವಿರೋಧ, ತುಮುಲತೆ ಮುಂತಾದವೆಲ್ಲ ಕನಸುಗಳಿಗೆ ಕಾರಣವಾದ ಮಾನಸಿಕ 

ಪ್ರಚೋದನೆಗಳು. ಇವುಗಳಿಂದ ಉತ್ಪನ್ನವಾಗುವ ಕನಸುಗಳಲ್ಲಿ ಹಲವು ವಿಧಗಳಿವೆ. ಮುಖ್ಯವಾದ ಕೆಲವನ್ನು ಮುಂದೆ ಸೂಚಿಸಿದೆ:
(i) ವ್ಯಕ್ತಿ ಎಚ್ಚರವಾಗಿದ್ದಾಗ ಏನನ್ನು ಕುರಿತು ಯೋಚಿಸುತ್ತಿದ್ದನೋ ಅದರ ಬಗ್ಗೆ ನಿರ್ಣಯಕ್ಕೆ ಬಂದಿರುವಂತೆ ಅಥವಾ ಸಮಸ್ಯೆಗೆ ಪರಿಹಾರ ದೊರಕಿದಂತೆ ಕೆಲವು ಬಾರಿ ಕನಸುಗಳಾಗುತ್ತವೆ. ಇವು ಸಮಸ್ಯೆ ಪರಿಹಾರ ಸ್ವಪ್ನಗಳು.
(ii) ಆತ್ಮವಿಮರ್ಶೆ ಅಥವಾ ಆತ್ಮಕಥೆಯಿಂದ ಕೂಡಿದ ಸ್ವಪ್ನಗಳು.
(iii) ವರ್ಣಸ್ವಪ್ನಗಳು: ಸಾಮಾನ್ಯವಾಗಿ ಹೆಚ್ಚಿನ ಸ್ವಪ್ನಗಳು ಕಪ್ಪು-ಬಿಳುಪು ಚಿತ್ರಗಳಿಂದ ಮಾತ್ರ ಕೂಡಿರುತ್ತವೆ. ಅಪುರೂಪಕ್ಕೆ ಸ್ವಪ್ನಗಳು ವರ್ಣರಂಜಿತವಾಗಿರುವುದೂ ಉಂಟು.
(iv) ವಿವರಣಾತ್ಮಕ ಸ್ವಪ್ನಗಳು: ಇಂಥ ಸ್ವಪ್ನಗಳು ದೊಡ್ಡವಾಗಿದ್ದು ವೈವಿಧ್ಯದಿಂದಲೂ ವಿಶೇಷವಾದ ವಿವರದಿಂದಲೂ ಕೂಡಿರುವುವುಲ್ಲದೆ ಪರಿಚ್ಛೇದ ಮತ್ತು ಅಂಕಗಳಲ್ಲಿ ವಿಭಜಿತವಾಗಿರುತ್ತವೆ.
(v) ಶಬ್ದಚಮತ್ಕಾರದ ಮೇಲೆ ಆಧಾರಿತವಾಗಿರುವ ಕನಸುಗಳು.
(vi) ಉದ್ದಿಶ್ಯಪುರ್ಣ ಸ್ವಪ್ನಗಳು.
(vii) ಭವಿಷ್ಯಸೂಚಕ ಸ್ವಪ್ನಗಳು: ತನ್ನ ಗಂಡ ಸೆನೇಟಿನಲ್ಲಿ ಕೊಲೆಯಾದಂತೆ ಸೀಸರನ ಪತ್ನಿ ಕಂಡಳೆಂದು ಹೇಳಲಾದ ಸ್ವಪ್ನವೊಂದು ಉದಾಹರಣೆ. ಆಕೆ ತಡೆದರೂ ಕೇಳದೆ ಸೀಸರ್ ಸೆನೇಟಿಗೆ ಹೋದ. ಕನಸು ನಿಜವಾಯಿತು.
(viii) ಸಮಕಾರಕ (ಕಾಂಪೆನ್ಸೇಟರಿ) ಸ್ವಪ್ನಗಳು: ವ್ಯಕ್ತಿಗಳು ವಾಸ್ತವ ಜೀವನದಲ್ಲಿ ದೋಷಗಳನ್ನೂ ನೈಚ್ಯಭಾವ ಸಂಕೀರ್ಣವನ್ನೂ (ಇನ್ಫೀರಿಯಾರಿಟಿ ಕಾಂಪ್ಲಕ್ಸ್‌) ಪಡೆದಿರುತ್ತಾರೆ. ಆದರೆ ಕನಸುಗಳಲ್ಲಿ ಇವೆಲ್ಲವನ್ನೂ ಜಯಿಸಿರುತ್ತಾರೆ. ಉದಾಹರಣೆಗೆ ತೊದಲುವ 

ದೋಷದಿಂದ ಕೂಡಿರುವಾತ ಕನಸಿನಲ್ಲಿ ಸರಾಗವಾಗಿ ಭಾಷಣ ಮಾಡುತ್ತಿರುವಂತೆ ಕಾಣಬಹುದು.
(ix) ಸೈನಿಕರ ಯುದ್ಧಸ್ವಪ್ನಗಳು: ಎಚ್ಚರವಾಗಿದ್ದಾಗ ಪಡೆದ ಅನುಭವ ಸನ್ನಿವೇಶಗಳೇ ಕನಸಿನಲ್ಲೂ ಕಾಣಿಸಿಕೊಳ್ಳುತ್ತವೆ.
(x) ಉದ್ವಿಗ್ನತಾಪುರ್ಣ ಸ್ವಪ್ನಗಳು: ಸಾಂಸಾರಿಕ ಸಾಮಾಜಿಕ ಭಯಗಳು, ಲೈಂಗಿಕ ಜೀವನದ ಅತೃಪ್ತಿ ಮುಂತಾದ ಭಯಗಳು ಉದ್ವಿಗ್ನತಾಪುರ್ಣ ಸ್ವಪ್ನಗಳನ್ನು ಉಂಟುಮಾಡುತ್ತವೆ. ತಾರುಣ್ಯಾವಸ್ಧೆಯಲ್ಲಿರುವ ಹೆಂಗಸರ ಮತ್ತು ಗಂಡಸರ ಹೆಚ್ಚಿನ ಸ್ವಪ್ನಗಳ ಹಿನ್ನೆಲೆಯಲ್ಲಿ 

ಇದನ್ನು ಕಾಣಬಹುದು. ಉದ್ವಿಗ್ನತೆ ಕಾಣಿಸಿಕೊಳ್ಳುವ ರೀತಿ ಅನೇಕ ವಿಧ. ಉದಾಹರಣೆಗೆ, ಪರೀಕ್ಷೆಗೆ ಕುಳಿತಿರುವಂತೆ, ಪ್ರಶ್ನೆ ಪತ್ರಿಕೆಗಳು ಬಹಳ ಕಠಿಣವಾಗಿರುವಂತೆ ಕಂಡುಬಂದು ಅದರಿಂದ ಮನಸ್ಸು ಉದ್ವಿಗ್ನವಾಗಬಹುದು; ಅಥವಾ ಕೊಲೆಯಾದಂತೆ, ಇಲ್ಲವೆ ಕೊಲೆ 

ಮಾಡಿದಂತೆ ಕಂಡುಬಂದು ಭಯಕಾರಕವಾಗಬಹುದು. ವ್ಯಕ್ತಿಯಲ್ಲಿ ಗುಪ್ತವಾಗಿರುವ ಹೆದರಿಕೆಗಳೂ ಅಧಿಕ ಪ್ರಮಾಣದ ಭಯಗಳೂ ನಿದ್ರಿಸುವ ವ್ಯಕ್ತಿಯಲ್ಲಿ ಭಯಂಕರ ಸ್ವಪ್ನಗಳನ್ನು (ನೈಟ್ ಮೇರ್) ಉಂಟುಮಾಡುತ್ತವೆ. ಮಗು ಎಲ್ಲಿ ಸತ್ತುಹೋಗುತ್ತದೋ ಎಂಬ ತಾಯಿಯ 

ಅತಿ ಭಯದಿಂದಾಗಿ ಅವಳಿಗೆ ಮಗು ಸತ್ತುಹೋಗಿರುವಂತೆಯೇ ಸ್ವಪ್ನವಾಗಬಹುದು. ಇಲ್ಲಿ ಅದು ಅವಳ ಇಚ್ಛೆಯನ್ನು ತೋರಿಸುವುದಿಲ್ಲ. ಅದಕ್ಕೆ ಬದಲು ಅವಳಲ್ಲಿ ಅಡಗಿರುವ ಭಯವನ್ನು, ಉದ್ವಿಗ್ನತೆಯನ್ನು ಸೂಚಿಸುತ್ತದೆ.
(xi) ಈಡೇರದೆ ಉಳಿದುಕೊಂಡ ಬಂiÀÄಕೆಗಳೂ ಕನಸಿನಲ್ಲಿ ಪುರೈಸಬಹುದು.
(xii) ನಿದ್ರಾರಕ್ಷಕ ಸ್ವಪ್ನಗಳು: ಹಲವು ಕನಸುಗಳು ನಿದ್ರಾರಕ್ಷಕಗಳು. ಉದಾಹರಣೆಗೆ, ನಿದ್ರೆಯಲ್ಲಿರುವಾಗ ವ್ಯಕ್ತಿಗೆ ಬಾಯಾರಿಕೆಯಾಗಬಹುದು; ಅಥವಾ ಮೂತ್ರಕೋಶ ತುಂಬಿದ್ದು, ಮೂತ್ರವಿಸರ್ಜನೆ ಮಾಡಬೇಕೆನಿಸಬಹುದು. ಆದರೂ ನಿದ್ರೆಯಿಂದ ಎಚ್ಚರಗೊಂಡು 

ಅಡುಗೆಮನೆಗೋ ಬಚ್ಚಲುಮನೆಗೋ ಎದ್ದುಹೋಗಲು ಮನಸ್ಸು ಒಪ್ಪುವುದಿಲ್ಲ. ಅಂಥ ಸಂದರ್ಭಗಳಲ್ಲಿ ಆ ಇಚ್ಛೆ ಕನಸಿನ ರೂಪದಲ್ಲಿ ಕಾಣಿಸಿಕೊಂಡು ಅದರಲ್ಲಿ ಪುರೈಕೆಯಾಗಿರುತ್ತದೆ. ಉದಾಹರಣೆಗೆ, ಹೇರಳವಾಗಿ ನೀರು ಕುಡಿಯುತ್ತಿರುವಂತೆ ಅಥವಾ ಮೂತ್ರವಿಸರ್ಜನೆ 

ಮಾಡುತ್ತಿರುವಂತೆ ಕನಸಿನಲ್ಲಿ ಕಂಡುಬರುತ್ತದೆ. ಇದರಿಂದಾಗಿ ನಿದ್ರಿತ ವ್ಯಕ್ತಿಯ ತತ್ಕ್ಷಣದ ಆಸೆ ಪುರೈಸಿದಂತಾಗುವುದರಿಂದ ಆತ ನಿದ್ರೆಯಿಂದ ಎಚ್ಚರಗೊಳ್ಳಬೇಕಾದ ಅವಶ್ಯಕತೆ ಯಿರುವುದಿಲ್ಲ.
(xii) ಕೆಲವು ಸಮಯಗಳಲ್ಲಿ ಒಂದೇ ಕನಸು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತದೆ. ಸ್ವಪ್ನಿ ಯಾವುದೋ ಸಮಸ್ಯೆಗೆ ಪರಿಹಾರ ದೊರಕದೆ ತೊಳಲಾಡುತ್ತಿರುವುದಕ್ಕೆ ಇದು ಸೂಚನೆ.
(xiv) ವ್ಯಕ್ತಿ ಒಮ್ಮೊಮ್ಮೆ ಕನಸಿನಲ್ಲಿ ಕೂಗಲು ಪ್ರಯತ್ನಿಸಬಹುದು. ಆದರೆ ಧ್ವನಿಯೇ ಹೊರಡುವುದಿಲ್ಲ. ಓಡಿಹೋಗಲು ಪ್ರಯತ್ನಿಸಿದಲ್ಲೂ ಕಾಲುಗಳು ನೆಲಕ್ಕೆ ಅಂಟಿಕೊಳ್ಳುತ್ತವೆ. ಉಸಿರು ಕಟ್ಟಿದಂತಾಗುತ್ತದೆ. ಹೀಗೆ ಅನೇಕ ರೀತಿಯಲ್ಲಿ ಸ್ವಪ್ನದಲ್ಲಿ ಚಟುವಟಿಕೆಗಳಿಗೆ 

ತಡೆಯೊದಗುತ್ತದೆ. ಇಂಥ ಸ್ವಪ್ನಗಳು ಸ್ವಪ್ನಿಯಲ್ಲಿರುವ ಇಡ್ ಮತ್ತು ಆದಿಅಹಂಗಳ ನಡುವಿನ ಘರ್ಷಣೆಯನ್ನು ಸೂಚಿಸುತ್ತವೆ.
(xv) ಕೊನೆಯದಾಗಿ ಕೆಲವು ಸಾಧಾರಣ ಸ್ವಪ್ನಗಳನ್ನು ಉದಾಹರಿಸಬಹುದು: ಹಾರಾಡುತ್ತಿರುವಂತೆ, ಈಜುತ್ತಿರುವಂತೆ, ಬೀಳುತ್ತಿರುವಂತೆ, ಸವಾರಿ ಮಾಡುತ್ತಿರುವಂತೆ, ಹತ್ತುತ್ತಿರುವಂತೆ, ಪ್ರಯಾಣ ಮಾಡುತ್ತಿರುವಂತೆ, ರೈಲು ಬಸ್ಸು ತಪ್ಪಿದಂತೆ, ಬೆತ್ತಲೆಯಾಗಿರುವಂತೆ, 

ಪ್ರಣಯಕ್ರೀಡೆಯಲ್ಲಿರುವಂತೆ, ಸಾಹಸಕೃತ್ಯಗಳನ್ನು ಮಾಡುತ್ತಿರುವಂತೆ. ಇವೆಲ್ಲ ಸಾಧಾರಣವಾಗಿ ಎಲ್ಲರಲ್ಲೂ ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಸ್ವಪ್ನಗಳಾಗಿವೆ.
ಕನಸಿನ ಕೆಲವು ಸಾಮಾನ್ಯ ಲಕ್ಷಣಗಳಿವು:
ಎಚ್ಚರವಾಗಿರುವಾಗ ವ್ಯಕ್ತಿ ಹೊರವಿಶ್ವವನ್ನು ಹೇಗೆ ಜ್ಞಾನೇಂದ್ರಿಯಗಳ ಮೂಲಕ ತಿಳಿಯುತ್ತಾನೆಯೋ ಹಾಗೆಯೇ ಕನಸನ್ನೂ ಆ ಮೂಲಕವೇ ತಿಳಿಯತ್ತಾನೆ. ಸ್ವಪ್ನಗಳು ಹೆಚ್ಚಾಗಿ ತಿಳಿಯಬರುವುದು ದೃಶ್ಯೇಂದ್ರಿಯದ ಮೂಲಕವೇ. ಶ್ರವಣೇಂದ್ರಿಯದ ಮೂಲಕ (ಅಂದರೆ 

ಕನಸಿನಲ್ಲಿ ದೃಶ್ಯಭಾಗವಿರದೆ ಕೇವಲ ಶಬ್ದಗಳು ಮಾತ್ರ ಕೇಳಿಬರುತ್ತವೆ) ತಿಳಿಯಬರುವ ಸ್ವಪ್ನಗಳೂ ಸಾಕಷ್ಟು ಸಂಖ್ಯೆಯಲ್ಲಿರುತ್ತವೆ. ಇದೇ ರೀತಿಯಲ್ಲಿ ಕೇವಲ ಘ್ರಾಣೇಂದ್ರಿಯದ ಮೂಲಕವೂ ಕನಸುಗಳನ್ನು ಅನುಭವಿಸಬಹುದು. ಅಂದರೆ ಕೇವಲ ವಾಸನೆಗಳು 

ತಿಳಿದುಬರುತ್ತವೆಯೇ ವಿನಾ ಶಬ್ದಭಾಗವಾಗಲಿ, ದೃಶ್ಯಭಾಗವಾಗಲಿ ಇರುವುದಿಲ್ಲ. ಇಂಥ ಕನಸುಗಳು ಬಹಳ ವಿರಳ, ಮಕ್ಕಳು ತಮ್ಮ ಐದನೆಯ ವರ್ಷದ ಒಳಗೆ ಅಂಧರಾದರೆ ಮುಂದೆ ಅವರ ಕನಸುಗಳಲ್ಲಿ ದೃಶ್ಯಭಾಗ ಮಾಯವಾಗಿದ್ದು ಅವು ಶಬ್ದ ಮತ್ತು ವಾಸನೆಗಳಿಂದ 

ಮಾತ್ರ ಕೂಡಿರುತ್ತವೆ.
ಹಗಲುಗನಸು: ಹಗಲುಗನಸಿಗೂ ಕನಸಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ, ಹಗಲುಗನಸಿನಲ್ಲಿ ದೃಶ್ಯಭಾಗಗಳಿರುವುದಿಲ್ಲ. ಅಲ್ಲದೆ, ಆಸೆಗಳೂ ಆಕಾಂಕ್ಷೆಗಳೂ ಅವುಗಳ ನೇರರೂಪದಲ್ಲಿ ಹೆಚ್ಚು ಸ್ಪಷ್ಟತೆಯಿಂದ ಪ್ರಕಟಗೊಳ್ಳುತ್ತವೆ. ಚಾಲ್ರ್ಸ್‌ಲ್ಯಾಂಬನ ಡ್ರೀಂ ಚಿಲ್ಡ್ರನ್ ಎಂಬ 

ಕೃತಿ ಹಗಲುಗನಸಿನ ಕೊಡುಗೆ. ಕನ್ನಡ ಪ್ರಬಂಧಕಾರ ಎ.ಎನ್. ಮೂರ್ತಿರಾಯರು ಹಗಲುಗನಸುಗಳು ಎಂಬ ಅಭಿದಾನದಲ್ಲಿ ಒಂದು ಪ್ರಬಂಧವನ್ನೇ ನೇಯ್ದಿದ್ದಾರೆ. ಹಗಲುಗನಸಿನಲ್ಲಿ ಆಶಾವಾದವೂ ದೃಢಭಾವನೆಗಳೂ ಭಗ್ನಮನೋರಥಗಳೂ ನಿರಾಶೆಗಳೂ ಸ್ಪಷ್ಟವಾಗಿ 

ಪ್ರತಿಫಲಿಸುತ್ತವೆ. ನಿತ್ಯದ ಅನೇಕ ತೊಂದರೆಗಳೂ ಅಸಹಾಯಕತೆಗಳೂ ವ್ಯಕ್ತಿಯನ್ನು ದುಃಖಿತನನ್ನಾಗಿಯೂ ನಿರಾಶನನ್ನಾಗಿಯೂ ಮಾಡುತ್ತವೆ. ಇದೇ ಭಾವನೆಯೆ ಅವನಲ್ಲಿ ಬಹಳ ಕಾಲ ಉಳಿದರೆ, ಅದು ಅವನ ಮಾನಸಿಕ ಸಮತೋಲವನ್ನು ಕೆಡಿಸಬಹುದು. ಇದರಿಂದ 

ತಪ್ಪಿಸಿಕೊಳ್ಳಲು ಹಾಗೂ ವಾಸ್ತವಿಕತೆ ಯಲ್ಲಿರುವ ಅಸಮರ್ಪಕತೆಯಿಂದ ತಪ್ಪಿಸಿಕೊಂಡು ತನ್ನ ಈಡೇರದ ಬಂiÀÄಕೆಗಳನ್ನು ಪುರೈಸಿಕೊಳ್ಳಲು ಹಗಲುಗನಸಿನ ಮರೆಹೋಗುತ್ತಾನೆ. ಹಗಲುಗನಸುಗಳೆಲ್ಲ ವ್ಯಕ್ತಿಯ ಸುತ್ತಲೇ ಹೆಣೆಯಲ್ಪಟ್ಟಿದ್ದು ವ್ಯಕ್ತಿಯೇ ಅದರ ಪ್ರಧಾನ 

ಪಾತ್ರಧಾರಿ.
ಪ್ರತಿಯೊಂದು ಮಗುವಿನಲ್ಲೂ ಉತ್ಸಾಹವೂ ಸಾಹಸಪ್ರಿಯತೆಯೂ ಎಲ್ಲರ ಮುಂದೆಯೂ ತನ್ನ ಪ್ರಭಾವವನ್ನು ತೋರಿಸಿಕೊಳ್ಳಬೇಕೆಂಬ ಆಸೆಯೂ ಇರುತ್ತವೆ. ಇಂಥ ಮನೋಭಾವಗಳಲ್ಲಿ ಕೆಲವಂಶಗಳು ಹಗಲುಗನಸುಗಳಲ್ಲಿ ಸಾರ್ಥಕ ಹೊಂದುತ್ತವೆ. ತಿರುಕನ ಕನಸು ಒಂದು 

ಉದಾಹರಣೆ. ಜನರನ್ನು ಆಕರ್ಷಿಸಲು ಅಶಕ್ತಳಾಗಿರುವ ಕುರೂಪಿ ಹೆಂಗಸು ತನ್ನ ಹಗಲುಗನಸಿನಲ್ಲಿ ತನ್ನನ್ನು ಸುರಸುಂದರಿಯಂತೆ ಚಿತ್ರಿಸಿಕೊಂಡು, ಸುತ್ತಮುತ್ತ ಹತ್ತಾರು ಆರಾಧಕರು ಅಂಗಲಾಚುತ್ತಿರುವಂತೆ ಕಲ್ಪಿಸಿಕೊಳ್ಳಬಹುದು.
ಹಗಲುಗನಸುಗಳು ಎಲ್ಲ ವಯಸ್ಸಿನವರಲ್ಲೂ ಕಂಡುಬರುತ್ತವೆ. ಆದರೆ ತಾರುಣ್ಯಾವಸ್ಥೆ ಯಲ್ಲಿ ವಿಶೇಷ. ಆಗಿನ ಹೆಚ್ಚಿನ ಹಗಲುಗನಸುಗಳೆಲ್ಲ ವ್ಯಕ್ತಿಯ ಭವಿಷ್ಯತ್ತು. ಸಾಹಸ, ಪ್ರಣಯ, ಸುಖದ ನಿರೀಕ್ಷೆ, ಗತವೈಭವ ಮುಂತಾದವನ್ನು ವಿಶೇಷವಾಗಿ ಒಳಗೊಂಡಿರುತ್ತವೆ. 

ಹಗಲುಗನಸು ವಾಸ್ತವಿಕತೆ ಹಾಗೂ ನೈಜತೆಯ ನಿರ್ಬಂಧದಿಂದ ಪುರ್ಣವಾಗಿ ಮುಕ್ತವಾಗಿರುತ್ತದೆ. ಹಗಲುಗನಸಿನಲ್ಲಿ ವ್ಯಕ್ತಿಯ ಕಲ್ಪನೆಗಳು ಮೇರೆಯಿಲ್ಲದೆ ಮೈದಾನದಲ್ಲಿ ಅನಂತ ರೂಪಗಳಲ್ಲಿ ಪ್ರಕಟಗೊಳ್ಳುತ್ತವೆ.
ಕಾದಂಬರಿಗಳನ್ನು ಓದುವಾಗಲೂ ಇದನ್ನು ಗಮನಿಸಬಹುದು. ಅನೇಕ ವೇಳೆ ಓದುಗ ತನ್ನ ವ್ಯಕ್ತಿತ್ವವನ್ನು ಮರೆತು, ಕಾದಂಬರಿಯ ನಾಯಕ ನಾಯಕಿಯರಲ್ಲಿ ಒಂದಾಗಿರುತ್ತಾನೆ. ಆದ್ದರಿಂದಲೇ ಕಥೆ ಚಲನಚಿತ್ರಗಳು ವಿಶೇಷ ಪ್ರೀತಿಗೆ ಪಾತ್ರವಾಗಿವೆ.
ಹಗಲುಗನಸಿಗೂ ಒಂದು ಮಿತಿ ಇರಬೇಕು; ಆಗ ಮಾತ್ರ ಅದು ವ್ಯಕ್ತಿಯ ಜೀವನದಲ್ಲಿ ಉಪಯುಕ್ತ ಪಾತ್ರವಹಿಸುತ್ತದೆ. ಹಗಲುಗನಸು ಒಂದು ರೀತಿಯ ಮನೋವಿಹಾರ. ಒಂದು ರೀತಿಯ ಅವ್ಯಕ್ತ ಹಾಗೂ ಅವರ್ಣನೀಯವಾದ-ಅದರೆ ತೋರಿಕೆಯ-ಉತ್ಸಾಹ, ಶಕ್ತಿ, 

ಆಶಾಭಾವನೆ ಮತ್ತು ಭಾವೋದ್ರೇಕಗಳಿಂದ ಕೂಡಿರುತ್ತದೆ. ಈ ರೀತಿಯ ಶಕ್ತಿಸಂಚಯನದಿಂದ ವ್ಯಕ್ತಿಯ ನಿತ್ಯಜೀವನದಲ್ಲಿಯ ಚಟುವಟಿಕೆಗಳಿಗೆ ಒಂದು ರೀತಿಯ ಉತ್ತೇಜನ ದೊರಕುತ್ತದೆ. ಅವನ ಧ್ಯೇಯ ಸಾಧನೆಗೆ ಇದು ಸಹಕಾರಿಯಾಗುತ್ತದೆ.
ಇಷ್ಟಾದರೂ ಹಗಲುಗನಸು ಕಾಣುವುದು ಒಂದು ದೃಷ್ಟಿಯಿಂದ ದೋಷಪುರಿತ. ವ್ಯಕ್ತಿ ವಾಸ್ತವಿಕತೆಯನ್ನು ಎದುರಿಸಲು ಅಶಕ್ತನಾದಾಗಲೆಲ್ಲ ಹಗಲುಗನಸಿನ ಮರೆಹೊಕ್ಕರೆ, ಹಗಲುಗನಸಿನಲ್ಲೇ ತನ್ನೆಲ್ಲ ಹೆಚ್ಚಿನ ಸಮಯವನ್ನೂ ವ್ಯಯ ಮಾಡುತ್ತ ಹೋದರೆ ಮುಂದೆ ಆತ 

ವಾಸ್ತವಿಕ ಪ್ರಪಂಚದಲ್ಲಿ ಸಮರ್ಪಕವಾಗಿ ಹೊಂದಿಕೊಂಡು ಬಾಳು ನಡೆಸಲಾರ. ಕಲ್ಪನಾಶಕ್ತಿ ವ್ಯಕ್ತಿಯ ಜೀವನವನ್ನು ರೂಪಿಸುವುದರಲ್ಲಿ ಸಹಾಯಕವಾಗಿರಬೇಕೇ ವಿನಾ ಅವನ ನಿತ್ಯಜೀವನಕ್ಕೆ ಅಡ್ಡಿಯಾಗಬಾರದು.
ಹಗಲುಗನಸು ಅತಿರೇಕಾವಸ್ಥೆಯನ್ನು ಮುಟ್ಟಿದಾಗ ವ್ಯಕ್ತಿಗೆ ಕಲ್ಪನಾಲೋಕವೇ ಹೆಚ್ಚು ವಾಸ್ತವಿಕವಾಗಿ ಕಂಡುಬರುತ್ತದೆ. ನೈಜತೆ ಮತ್ತು ಅನೈಜತೆಗಳ ನಡುವಿನ ವ್ಯತ್ಯಾಸವನ್ನು ಗುರ್ತಿಸುವುದರಲ್ಲಿ ಆತ ಅಶಕ್ತನಾಗಿರುತ್ತಾನೆ. ಈ ಅವಸ್ಥೆಯೇ ಮತ್ತಷ್ಟು ಮುಂದುವರಿದಾಗ ಆ 

ವ್ಯಕ್ತಿಗೆ ಸರಾಗವಾಗಿ ಮಾತಾಡಲೂ ಸಾಧ್ಯವಾಗುವುದಿಲ್ಲ. ಆತ ತನ್ನ ಸುತ್ತಮುತ್ತಲಿನª Àರೊಂದಿಗೆ ಹೊಂದಿಕೊಳ್ಳಲಾರ. ಕೊನೆಗೆ ಸ್ವಪ್ನಲೋಕದಲ್ಲೇ ಬಂದಿಯಾಗಿ ಮನೋವಿದಳನ ದಲ್ಲಿ (ಸ್ಕಿಜೊóಫ್ರೇನಿಯ) ಪರ್ಯವಸಾನ ಹೊಂದಬಹುದು. ಇಂಥವ 

ಹೊರಜಗತ್ತಿನೊಂದಿಗೆ ಸಂಪುರ್ಣವಾಗಿ ಸಂಪರ್ಕ ಕಳೆದುಕೊಂಡಿದ್ದರೂ ಇವನ ಕಲ್ಪನಾಶಕ್ತಿ ಮಾತ್ರ ಅಗಾಧ ವಾಗಿರುತ್ತದೆ. ತಲೆದಿಂಬನ್ನೇ ತಬ್ಬಿಕೊಂಡು. ತನ್ನ ಗತಿಸಿದ ಪುತ್ರ ಮರಳಿ ಬಂದಂತೆ ಭಾವಿಸಿಕೊಂಡು, ಅದರೊಂದಿಗೆ ಮಾತಾಡುವ, ಮುದ್ದಿಸುವ ಅನೇಕ 

ರೋಗಿಗಳು ಕಂಡುಬಂದಿದ್ದಾರೆ.
ಈ ರೀತಿಯ ಅತಿರೇಕದ ಅಪಾಯದಿಂದ ಮಕ್ಕಳನ್ನು ತಪ್ಪಿಸಬೇಕಾದರೆ, ಅವರನ್ನು ಕ್ರೂರವಾಗಿ ಶಿಕ್ಷಿಸುವುದರಿಂದಾಗಲಿ ವಾಸ್ತವಿಕತೆಯ ಪರಿಚಯವನ್ನು ಒಮ್ಮೆಲೇ ಮಾಡಿಸುವುದರಿಂದಾಗಲಿ ಪ್ರಯೋಜನವಾಗುವುದಿಲ್ಲ. ಅದಕ್ಕೆ ಬದಲು ಸಾವಕಾಶವಾಗಿ, ತಾಳ್ಮೆಯಿಂದ 

ಅವರನ್ನು ಪರಿವರ್ತಿಸಬೇಕು. ಹಗಲುಗನಸಿನಲ್ಲಿ ಸಿಗುವ ಸುಖಕ್ಕಿಂತ ವಾಸ್ತವಿಕವಾಗಿ ನಡೆದುಕೊಳ್ಳುವುದರಲ್ಲಿ ಹೆಚ್ಚಿನ ಸುಖವಿರುವುದನ್ನು ಮನವರಿಕೆ ಮಾಡಿಕೊಡಬೇಕು. ವಾಸ್ತವಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರೊಂದಿಗೆ ಹೋರಾಡಿ ಜಯ ಗಳಿಸುವ 

ಹುಮ್ಮಸ್ಸನ್ನು ಅವರಲ್ಲಿ ತುಂಬಬೇಕು.    (ಎಲ್.ಎನ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ